ಕಟ್ಟೀಮನಿ, ಬಸವರಾಜ : 1919-89. ಕನ್ನಡ ಪ್ರಗತಿಶೀಲ ಸಾಹಿತ್ಯದ ಅಗ್ರಮಾನ್ಯ ಲೇಖಕರು. 1919 ಅಕ್ಟೋಬರ್ 5ರಂದು ಬೆಳಗಾಂ ಜಿಲ್ಲೆಯ ಗೋಕಾಕದಲ್ಲಿ ಜನಿಸಿದರು. ತಂದೆ ಅಪ್ಪಯ್ಯಣ್ಣ, ತಾಯಿ ಬಾಳವ್ವ, ತಾಯಿಯ ತವರೂರು ಮಲಾಮರಡಿ. ಅಲ್ಲಿನ ಬಸವಣ್ಣ ದೇವರಿಗೆ ಹರಕೆ ಹೊತ್ತು ಹುಟ್ಟಿದ ಹುಡುಗ ಬಸ್ಯಾ. ಅದೇ ಹೆಸರು ನಾನಾ ರೀತಿಯಾಗಿ ಬೆಳೆಯಿತು. ಬಸಣ್ಣ, ಬಸಪ್ಪ, ಬಸವೇಶ್ವರ -ಹೀಗೆ ವಿವಿಧ ರೂಪ ತಾಳಿತು. ಪತ್ರಿಕಾ ಸಂಪಾದಕರೊಬ್ಬರು ಬಸವರಾಜ ಎಂದು ಕರೆದರು. ಅದೇ ಹೆಸರು ಉಳಿದು ಸಾಹಿತ್ಯ ಪ್ರಪಂಚದಲ್ಲಿ ಬಸವರಾಜ ಕಟ್ಟೀಮನಿ ಎಂದೇ ಪ್ರಸಿದ್ಧರಾದರು. ನಿರಕ್ಷರಿಯಾಗಿದ್ದ ತಂದೆ ಅಪ್ಪಯ್ಯಣ್ಣ ನವರು ಸಂಬಂದಿಕರೊಬ್ಬರ ಮೋಸಕ್ಕೆ ಬಲಿಯಾಗಿ ಇದ್ದ ಸಣ್ಣಹೊಲವನ್ನೂ ಕಳೆದುಕೊಂಡರು. ಜೀವನಕ್ಕಾಗಿ ಸಶಸ್ತ್ರ ಪೊಲೀಸ್ ಪಡೆಯಲ್ಲಿ ಸಿಪಾಯಿಯಾಗಿ ಸೇರಿಕೊಂಡರು.

ಕಟ್ಟೀಮನಿಯವರ ವ್ಯಕ್ತಿತ್ವದಲ್ಲಿ ಕಾಣಿಸುತ್ತಿದ್ದ ನೇರವಾದ ನಡೆ, ನುಡಿ, ಪ್ರಾಮಾಣಿಕತೆ, ಸರಳತೆ, ಔದಾರ್ಯ ಮುಂತಾದ ಗುಣಗಳು ನಿರಕ್ಷರಿಗಳಾದ ರೈತಾಪಿವರ್ಗದ ತಂದೆ ತಾಯಿಗಳಿಂದಲೇ ಬಂದವು. ಕುಂದರನಾಡ ಮಣ್ಣಿನ ಗುಣಗಳಾದ ಸ್ವಾಬಿsಮಾನ, ಧೈರ್ಯ, ಕ್ರಾಂತಿಕಾರಿ ಮನೋಭಾವಗಳನ್ನು ಇವರು ರೂಡಿsಸಿಕೊಂಡಿದ್ದರು. ಹಸಿವು, ಬಡತನ ಹುಟ್ಟಿನಿಂದಲೇ ಬಂದವು. ತಂದೆಗೆ ಆಗಾಗ ಬೇರೆ ಬೇರೆ ಊರುಗಳಿಗೆ ವರ್ಗವಾಗುತ್ತಿತ್ತು. ಆ ಊರುಗಳಲ್ಲಿ ಸರಿಯಾದ ಶಾಲೆ ಇರುತ್ತಿರಲಿಲ್ಲ. ಜೊತೆಗೆ ಭಾಷೆಯ ಸಮಸ್ಯೆ ಬೇರೆ. ಇದರಿಂದ ಕಟ್ಟೀಮನಿಯವರಿಗೆ ಶಿಕ್ಷಣದಲ್ಲಿ ಒಂದು ಬಗೆಯ ನಿರಾಸಕ್ತಿ ಉಂಟಾಯಿತು. ತಾಯಿಯ ಒಲವು ಒತ್ತಾಸೆಗಳಿಂದಲೇ ಇವರು ಕೊಂಚ ಶಿಕ್ಷಣ ಪಡೆದರು.

ಇವರ ಪ್ರಾಥಮಿಕ ಶಿಕ್ಷಣ ತೊಡಗಿದ್ದು ಕಿತ್ತೂರಿನಲ್ಲಿ. ಅಲ್ಲಿಂದ ಗೋಕಾಕಕ್ಕೆ ಬಂದು ಮೂರನೆಯ ತರಗತಿಗೆ ಸೇರಿದರು. ಅಲ್ಲಿ ಅಭ್ಯಾಸ ಮಾಡುತ್ತಿದ್ದಾಗಲೆ ಇವರಿಗೆ ಕಿವುಡುತನ ಕಾಣಿಸಿಕೊಂಡಿತು. ಎಷ್ಟು ಪ್ರಯತ್ನಿಸಿದರೂ ಇವರು ಕಿವುಡುತನದಿಂದ ಪಾರಾಗಲಿಲ್ಲ. ಇದರಿಂದ ಇವರಲ್ಲಿ ಕೀಳರಿಮೆ ಬೆಳೆಯಿತು. ಸೂಕ್ಷ್ಮಗ್ರಹಣಶಕ್ತಿ ಹಾಗೂ ಜ್ಞಾಪಕ ಶಕ್ತಿಗಳು ಇವರನ್ನು ತರಗತಿಗಳಲ್ಲಿ ಮೊದಲಿಗರನ್ನಾಗಿಸುತ್ತಿದ್ದುವು. ಆದರೆ ಇವರಲ್ಲಿ ಏಕಾಂಗಿತನ ಮತ್ತು ಅಂತರ್ಮುಖತೆಗಳು ನೆಲೆಯಾದವು. ಈ ಅಂಶಗಳು ಇವರ ವ್ಯಕ್ತಿತ್ವದ ಮೇಲೂ ಪ್ರಭಾವಬೀರಿದುವು. ಬೆಳಗಾಂವಿಯಲ್ಲಿ ಇವರು ಪ್ರ.ಗೋ. ಕುಲಕರ್ಣಿಯವರ ಶಿಷ್ಯರಾಗಿದ್ದರು. ಕಟ್ಟೀಮನಿಯವರ ಬದುಕಿನಲ್ಲಿ ಗಾಢ ಪ್ರಭಾವ ಬೀರಿದ ವ್ಯಕ್ತಿಗಳಲ್ಲಿ ಅವರೂ ಒಬ್ಬರು. ಅವರ ಆಶ್ರಯದಲ್ಲಿ ಸಾಹಿತ್ಯದ ಅಬಿರುಚಿ ಬೆಳೆಸಿಕೊಂಡರು. ವಿದ್ಯಾರ್ಥಿ ಎಂಬ ಕೈಬರೆಹದ ಪತ್ರಿಕೆಯನ್ನೂ ಆರಂಬಿಸಿದರು. ಜಿಲ್ಲೆಗೆ ನಾಲ್ಕನೆಯವರಾಗಿ ಮುಲ್ಕಿ ಪರೀಕ್ಷೆಯಲ್ಲಿ ತೇರ್ಗಡೆಯಾದರು.

ತಂದೆಯವರಿಗೆ ಬೆಳಗಾಂವಿಯಿಂದ ಪುಣೆಗೆ ವರ್ಗವಾಯಿತು. ಆಗ ಶಿಕ್ಷಣಕ್ಕೆ ನಿಜವಾದ ತಡೆ ಉಂಟಾಯಿತು. ಕಟೀಮನಿಯವರನ್ನು ಬೆಳಗಾಂವಿಯಲ್ಲಿಯೇ ಬಿಡುವುದು ಅನಿವಾರ್ಯವಾಯಿತು. ತಮ್ಮ ಮನೆಯ ಸ್ಥಿತಿಗತಿಗಳನ್ನು ಚೆನ್ನಾಗಿ ತಿಳಿದಿದ್ದ ಇವರು ಬೆಳಗಾಂವಿಯಲ್ಲಿದ್ದಾಗ ಪತ್ರಿಕೆ ಹಂಚಿ, ಅಲ್ಪ ಸ್ವಲ್ಪ ಸಂಪಾದನೆ ಮಾಡುತ್ತ, ತಾವೇ ಅಡುಗೆ ಮಾಡಿಕೊಂಡು ಅಭ್ಯಾಸ ಸಾಗಿಸಿದರು. ಗಣಿತ ಮಾತ್ರ ಇವರಿಗೆ ತಲೆನೋವಿನ ವಿಷಯವಾಗಿತ್ತು. ಅದರಿಂದಲೇ ಇವರು ಮೆಟ್ರಿಕ್ ಪರೀಕ್ಷೆಯಲ್ಲಿ ತೇರ್ಗಡೆಯಾಗದೆ ಉಳಿದರು. ಸರ್ಕಾರಿ ನೌಕರಿ ತಮ್ಮ ಗುರಿಯಲ್ಲ ಎಂದುಕೊಂಡು ಶಾಲೆ ತ್ಯಜಿಸಿದರು.

ಸಾಹಿತ್ಯ, ಪತ್ರಿಕೋದ್ಯಮಗಳಲ್ಲಿ ಕಟ್ಟೀಮನಿಯವರಿಗೆ ಆರಂಭದಿಂದಲೂ ಆಸಕ್ತಿ, ಜೀವನಕ್ಕಾಗಿ ಅದೇ ಕ್ಷೇತ್ರಗಳನ್ನು ಆಶ್ರಯಿಸಿದರು. ಇವರು ಕೆಲಸಕ್ಕೆ ಸೇರಿದ ಮೊದಲನೆಯ ಪತ್ರಿಕೆ ‘ಸಂಯುಕ್ತ ಕರ್ನಾಟಕ’. ಅಲ್ಲಿಂದ ಮುಂದೆ ‘ತರುಣ ಕರ್ನಾಟಕ’ದಲ್ಲಿ ಕೆಲಸಕ್ಕೆ ಸೇರಿದರು. ದಿವಾಕರರೊಡನೆ ನಡೆಸಿದ ಒಂದು ಸಂದರ್ಶನದ ಫಲವಾಗಿ ಅದನ್ನೂ ಬಿಡಬೇಕಾಯಿತು. ಘಾಣೇಕರ ಅವರ ‘ಸಮಾಜ’ ಪತ್ರಿಕೆಗೆ ಸೇರಿದರು. ಅದು ಬೆಂಗಳೂರಿಗೆ ಹೋದಾಗ ತಾವು ಬೆಂಗಳೂರಿಗೆ ಹೋದರು. ಆದರೆ ಅಲ್ಲಿ ಅದರ ಮಾಲೀಕರಾಗಿದ್ದವರ ಅದಿಕಾರಶಾಹಿ ಪ್ರವೃತ್ತಿಗೆ ಬೇಸತ್ತು ಪ್ರತಿಭಟಿಸಿ ಪುನಃ ಹುಬ್ಬಳ್ಳಿಗೆ ಬಂದು ‘ಲೋಕ ಮತ’ ಪತ್ರಿಕೆ ಸೇರಿದರು. ಅದನ್ನೂ ಬಿಟ್ಟು ಗದಗಿಗೆ ಹೋಗಿ ಅಲ್ಲಿ ‘ಕರ್ನಾಟಕ ಬಂಧು’ ಪತ್ರಿಕೆಯಲ್ಲಿ  ಕೆಲಸಕ್ಕೆ ತೊಡಗಿದರು. ಆ ಪತ್ರಿಕೆಯಲ್ಲಿರುವಾಗಲೇ ಕನ್ನಡದ ಹಿರಿಯ ಸಾಹಿತಿಗಳಾದ ಮಾಸ್ತಿ, ಬೇಂದ್ರೆ,ಅನಕೃ ಮೊದಲಾದವರ ಸಂಪರ್ಕಉಂಟಾಯಿತು. ಯಾವ ಪತ್ರಿಕೆಯಲ್ಲಿಯೂ ಇಪ್ಪತ್ತು ರೂಪಾಯಿಗಿಂತ ಹೆಚ್ಚಿನ ಸಂಬಳ ದೊರೆಯುತ್ತಿರಲಿಲ್ಲ. ‘ಕರ್ನಾಟಕ ಬಂಧು’ ಪತ್ರಿಕೆಯಲ್ಲಿ ಇದ್ದಕ್ಕಿದ್ದಂತೆ ಸಂಬಳ ಕಡಿಮೆ ಮಾಡಿದ್ದರಿಂದ ಅದನ್ನು ಬಿಟ್ಟು ಬೆಂಗಳೂರಿಗೆ ಬಂದರು. ಶಿವಮೂರ್ತಿ ಶಾಸ್ತ್ರಿಗಳು ಸಂಪಾದಿಸುತ್ತಿದ್ದ ‘ಸ್ವತಂತ್ರ ಕರ್ನಾಟಕ’ ಪತ್ರಿಕೆ ಸೇರಿದರು. ಆದರೆ ಇಲ್ಲಿಯೂ ಬಹಳ ಕಾಲ ನಿಲ್ಲುವುದು ಕಟ್ಟೀಮನಿಯವರಿಗೆ ಸಾಧ್ಯವಾಗಲಿಲ್ಲ.

1942ರ ಚಲೇಜಾವ್ ಚಳವಳಿಯಲ್ಲಿ ಕಟ್ಟೀಮನಿಯವರೂ ದುಮುಕಿದರು. ಉಗ್ರಭಾಷಣಗಳನ್ನು ಮಾಡಿ, ಬಂಧನಕ್ಕೆ ಒಳಗಾದರು. ಇದರಿಂದ ಇವರ ಅನುಭವ ವಿಸ್ತಾರಗೊಂಡಿತು. ಸೆರೆಮನೆಯಿಂದ ಹೊರಬಂದ ಮೇಲೆ ಮತ್ತೆ ಪತ್ರಿಕೋದ್ಯೋಗದ ಹುಡುಕಾಟದಲ್ಲಿ ತೊಡಗಿದರು. ‘ಉಷಾ’ ಪತ್ರಿಕೆಯಲ್ಲಿ ದುಡಿದು ಆ ಪತ್ರಿಕೆಗೊಂದು ಹೆಸರು ತಂದರು. ಆಗ ಕನ್ನಡದ ಸಿದ್ಧಪ್ರಸಿದ್ಧರೆಲ್ಲ ಅದರಲ್ಲಿ ಬರೆಯುತ್ತಿದ್ದರು. ‘ಉಷಾ’ ಪತ್ರಿಕೆಯೊಡನೆ ಇವರೂ ಬೆಳೆದರು. ಅದೇ ದಿನಗಳಲ್ಲಿ ಇವರ ಮದುವೆಯೂ ಆಯಿತು. ಈ ದಂಪತಿಗಳಿಗೆ ಐವರು ಮಕ್ಕಳು. ಎರಡು ಗಂಡು, ಮೂರು ಹೆಣ್ಣು. ಪ್ರಗತಿಶೀಲ ವಿಚಾರಗಳನ್ನು ಆಧರಿಸಿ ‘ಸ್ವತಂತ್ರ’ ಪತ್ರಿಕೆಯನ್ನು ಸ್ವಲ್ಪ ಕಾಲ ನಡೆಸಿದ್ದು ಇವರ ಮಹತ್ವದ ಸಾಧನೆ. ಇವರ ನಿಷುವಿರ ಸ್ವಭಾವ ಇವರನ್ನು ಯಾವ ಪತ್ರಿಕೆಯಲ್ಲಿಯೂ ಬಹಳ ಕಾಲ ಉಳಿಯುವಂತೆ ಮಾಡಲಿಲ್ಲ.

ಇವರು ಸು. 60 ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಕಾದಂಬರಿಗಳದೇ ಮೇಲುಗೈ. ಹೆಚ್ಚು ಕಡಿಮೆ 40 ಕಾದಂಬರಿಗಳನ್ನು ಬರೆದಿದ್ದಾರೆ. ಹತ್ತು ಕಥಾಸಂಕಲನಗಳು ಪ್ರಕಟವಾಗಿವೆ. ಎರಡು ಕವನಸಂಗ್ರಹಗಳೂ ಎರಡು ಜೀವನಚಿತ್ರಗಳೂ ಒಂದು ಪ್ರವಾಸ ಕಥನವ ಪ್ರಕಟಗೊಂಡಿವೆ. ಕಾದಂಬರಿಕಾರನ ಆತ್ಮಕಥೆ ಶೀರ್ಷಿಕೆಯಲ್ಲಿ ಆತ್ಮಕಥೆ ರಚಿಸಿದ್ದಾರೆ (1981). 

ಇವರ ಮೊದಲನೆಯ ಕಾದಂಬರಿ ಸ್ವಾತಂತ್ರ್ಯದೆಡೆಗೆ 1946ರಲ್ಲಿ ಪ್ರಕಟವಾಯಿತು. ಅಲ್ಲಿಂದ ಇವರು ಸತತವಾಗಿ ಬರೆಯತೊಡಗಿದರು. ಇವರ ಕಾದಂಬರಿಗಳಲ್ಲಿ ಅತ್ಯಂತ ಪ್ರಸಿದ್ಧವಾದವು ಎಂದರೆ ಮೋಹದ ಬಲೆಯಲ್ಲಿ (1952) ಮತ್ತು ಜರತಾರಿ ಜಗದ್ಗುರು (1953). ಆದರೆ ಗುಣದಲ್ಲಿ ಅವು ಅದೇ ಮಟ್ಟದವು ಎಂದು ಹೇಳುವಂತಿಲ್ಲ. ಇವರ ಕಾದಂಬರಿಗಳಲ್ಲಿ ನೆನೆಯಬೇಕಾದವು: ಮಾಡಿ ಮಡಿದವರು (1950), ಮಣ್ಣು ಮತ್ತು ಹೆಣ್ಣು (1953), ಖಾನಾವಳಿಯಲ್ಲಿ ನೀಲಾ (1953). ಜ್ವಾಲಾಮುಖಿಯ ಮೇಲೆ (1951), ಇವರಿಗೆ ಸೋವಿಯೆತ್ ದೇಶದ ನೆಹರೂ ಪ್ರಶಸ್ತಿ ತಂದು ಕೊಟ್ಟ ಕೃತಿ. ನಾನೂ ಪೊಲೀಸನಾಗಿದ್ದೆ ಹಾಗೂ ಬಂಗಾರದ ಜಿಂಕೆಯ ಹಿಂದೆ (1954) - ಈ ಎರಡೂ ಕಾದಂಬರಿಗಳು ಆತ್ಮಕಥನಾತ್ಮಕವಾದವು. ಗಿರಿಯ ನವಿಲು (1956) ಅಕ್ಕಮಹಾದೇವಿಯನ್ನು ಕುರಿತದ್ದು. ಇವರ ಯಾವುದೇ ಕಾದಂಬರಿಯಲ್ಲಾದರೂ ಆಸಕ್ತಿಯಿಂದ ಓದಿಸಿಕೊಳ್ಳುವ ಗುಣ ಇರುತ್ತದೆ. ಇವರ ಸಾಹಿತ್ಯದಲ್ಲಿ ವಾಸ್ತವತೆಯ ಯಥಾವತ್ತಾದ ಚಿತ್ರಣ ದೊರಕುತ್ತದೆ. ಅವುಗಳಲ್ಲಿ ಬರುವ ವ್ಯಕ್ತಿಗಳ ಹೆಸರಾದರೂ ನಿಜಜೀವನದ ವ್ಯಕ್ತಿಗಳ ಹೆಸರಿನ ಅಲ್ಪಸ್ವಲ್ಪ ಮಾರ್ಪಾಡೇ ಆಗಿರುತ್ತದೆ. ಇವರ ಕಾದಂಬರಿಗಳಲ್ಲಿ ಹೆಚ್ಚಿನ ಕಲೆಗಾರಿಕೆ ಕಾಣಿಸುವುದಿಲ್ಲ; ತಂತ್ರಗಾರಿಕೆಗೆ ಇವರು ಹೆಚ್ಚಿನ ಗಮನ ಕೊಡಲಿಲ್ಲ. ‘‘ಕಲೆಗಾಗಿ ಕಲೆ ಎನ್ನುವ ದೃಷ್ಟಿ ನನ್ನದಲ್ಲ. ನಮ್ಮ ಸುತ್ತಲಿನ ಹತ್ತಾರು ಜೀವಿಗಳ ಬದುಕು ಬಂಗಾರವಾಗಬೇಕು ಎನ್ನುವ ದೃಷ್ಟಿ ನನ್ನದು’’ ಎಂದು ಇವರೇ ಹೇಳಿಕೊಂಡಿದ್ದಾರೆ.

ಕಟ್ಟೀಮನಿಯವರು ವಿಧಾನ ಪರಿಷತ್ತಿನ ನಾಮಕರಣ ಸದಸ್ಯರಾಗಿದ್ದರು (1968-74). ಸೋವಿಯೆತ್ ದೇಶಕ್ಕೂ ಭೇಟಿ ಕೊಟ್ಟಿದ್ದರು. ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿದ್ದರು (1970-73). ಅನೇಕ ಸಂಘ ಸಂಸ್ಥೆಗಳೊಡನೆ ಇವರ ಸಂಬಂಧ ನಿಕಟವಾಗಿತ್ತು. ಇವರ ಜೀವನ ಮತ್ತು ಸಾಹಿತ್ಯವನ್ನು ಕುರಿತಂತೆ ಬಸವರಾಜ ಸಾದರ ಅಧ್ಯಯನ ಮಾಡಿ  ಪಿಎಚ್.ಡಿ. ಪದವಿ ಪಡೆದಿದ್ದಾರೆ.	(ಎಚ್.ಎಂ.ಎನ್ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ